Monday, April 6, 2009

ಒಡೆದ ಚೂರುಗಳು


೧. ಮನದಿಂಗಿತವ ಪದ ಮಾಡಲು ತಿಳಿದಿಲ್ಲ
ಹಾಡ ಹಾಡಲು ಎನಗೆ ರಾಗ ಗೊತ್ತಿಲ್ಲ
ಚಿತ್ರ ಬರೆಯಲು ಬಣ್ಣದರಿವಿಲ್ಲ
ನಾಟ್ಯದಿಂ ಹೇಳಲು ಹೆಜ್ಜೆ ಬರಲ್ಲೊಲ್ಲ!

೨. ಮನದಾಕಾಶವನು ಕವಿದಿವೆ ಮೋಡಗಳು
ಬೆಳದಿಂಗಳನು ಸವಿಯಲು ಬಿಡುತ್ತಿಲ್ಲ
ಸೂರ್ಯನ ಕಿರಣ ನನ್ನ ಮೈ ಸೋಕುತಿಲ್ಲ
ಚುಕ್ಕಿಗಳಾಟವ ನೋಡಲಾಗುತ್ತಿಲ್ಲ !

೩. ನೆಲಕುರುಳಿ ಹೊರಳಾಡುತಿರೆ
ಮಣ್ಣೊಳಗೆ ಮಣ್ಣಾಗುವ ಬಯಕೆ
ಯಾರೋ ಕೈ ಹಿಡಿದೆತ್ತಿದ ಭ್ರಾಂತು
ಹೃದಯ ಸೀಳಿದ ಭಾದೆ!

೪. ಆ ಕಡೆಗೆ ಈ ಕಡೆಗೆ ಸುತ್ತಲೂ ಎಳೆಯುವರೇ
ನೋವು ಸಹಿಸದೆ ಮನ ಛಿದ್ರ ಛಿದ್ರ .
ಹೊಲೆಯ ಹೋದರೆ ವಸ್ತ್ರ ತಾನದುವೆ?
ಚುಚ್ಚಿ ಒಳ ಹೋದ ಸೂಜಿ ತಾ ಛಿದ್ರ!

೫.ಮನದ ದಾರಿಯ ತುಂಬ ಒಡೆದ ಗಾಜಿನ ಚೂರು
ಹೆಜ್ಜೆ ಮುಂದಿಡಲೊಂದು ಕತ್ತಿ ಎತ್ತುವರ್ಯಾರೋ
ಮುಖ ಮುಚ್ಚಿ ಅಳಲೊಂದೂ ಹನಿ ಉಳಿದಿಲ್ಲ ಕಣ್ಣಲ್ಲಿ
ಮುಂದಿನ ತಿರುವ್ಯಾವುದೋ ? ಎಲ್ಲ ಅಸ್ಪಷ್ಟ !!