Friday, January 1, 2010

ಹೊಸ ವರ್ಷ


'ಫಳ್'!!
ಗಾಜು ಚೂರು ಚೂರು..
ಉಳಿದ ಕೊನೆ ಹೆಂಡದ ಹನಿಯೂ
ಗುಂಡಿ ಪಾಲು!
ಹೆಗಲ ಮೇಲೆ
ತನ್ನ ಹಸಿವಿನ ಕಣ್ಣೀರನ್ನು
ತಾನೇ ಕುಡಿದು ಮಲಗಿದ ಕಂದ!
ತೊಟ್ಟಿಯಲ್ಲಿ ಬಿದ್ದ ಚೂರು ರೊಟ್ಟಿಗೂ
ಕಿರಿದು ನೋಡುವ ಶ್ವಾನನ ಸವಾಲು..
ಸ್ಪರ್ಧೆಗಿಳಿದಳು ಮತ್ತೊಬ್ಬ ಮುದುಕಿ!
ನಡುಗುವ ಚಳಿಯಲ್ಲಿ
ಕೆಂಡದ ಕೋಪ ..
ಸಾವಿರ ತೇಪೆಗಳ ಮೇಲೂ
ಇನ್ನೊಂದು ರಂದ್ರದ ಉಡುಗೊರೆ ..
ಇದು ಹೊಸ ವರ್ಷ!

ಒಂಟಿ .... ಕಾನನದಲ್ಲಿ...

ಗಾಳಿಯಲ್ಲಿ ಹಾರಿ ಬಂದ ಬೀಜದ ಕೂಸು ನಾನು
ಮಾಲಿಯ ಒರಟು ಕೈಗಳೆಂದೂ ನನ್ನ ಮುತ್ತಿಕ್ಕಿಲ್ಲ!
ಬರಡು ಭೂಮಿಯಲ್ಲಿಯೂ ನನ್ನ ಹಠ ನಿಂತಿತು
ಒಳನುಗ್ಗಿ ಕಿರುಬೆರಳ ಹೊರ ಚಾಚಿದೆ,
ಮಳೆ ಸುರಿಯುವ ಹುಚ್ಚು ನಿರೀಕ್ಷೆಯಲ್ಲಿ!

ನನ್ನ ಪರಿಸ್ಥಿತಿಗೆ ಸಣ್ಣ ಮೋಡಗಳ ಅಶ್ರುತರ್ಪಣ ,
ಧಾರಾಕಾರವಾಗಿ ಹರಿದ ಬಿಸಿಲಿಗೆ ಎದೆಯೊಡ್ಡಿ ನಕ್ಕೆ!
ಸೊಕ್ಕಿ ಬೆಳೆದ ಮೈಗೆ ವರ್ಷಗಳ ಗುರುತಿಲ್ಲ!
ಹಕ್ಕಿಗಳೆರೆಡು ಮನೆ ಮಾಡಿ ಮರಿ ಹಾಕಿ ಹಾರಿದವು
ಈಗ ಮಾಲಿಯ ಪ್ರೀತಿಯ ಅಗತ್ಯ ಕಾಣೆ!

ಆದರೆ ,
ನನ್ನ ಒಣಗಿದ ಎಲೆಗಳಿಗೆ ನನ್ನದೇ ನೆರಳು!
ಆಸರೆ ಅರಸುವ ಹೆಜ್ಜೆ ಸಪ್ಪಳವಿಲ್ಲ,
ನನ್ನ ಹೂವಿನ ಪರಿಮಳ ನನಗಷ್ಟೇ ಉಸಿರು ,
ಹಣ್ಣು ಮಾಗಿ ಭಾರವಾಗಿ ಕೆಳಬಿದ್ದು ರಸಹೀನವಾಗಿವೆ !

ಸಹಸ್ರ ಕೈ ಚಾಚಿ ನಿಂತಿರುವೆ
ದಾರಿಹೋಕನೊಬ್ಬನ ಬರುವಿಗಾಗಿ !
ಮುದುಡಿ ಮುರಿದು ಬಿದ್ದು ಹೋಳಾಗುವ ಮುನ್ನ ,
ಕನಸು ಕಂಡೇನೆ? ಅರಸ ಬಂದಾನೆ?

A new year wish