ನೀ ಹೋದಲೆಲ್ಲ ನಾ ಬಂದೆ ನಿನ್ನ ಹಿಂದೆ
ಏನನ್ನೂ ಪ್ರಶ್ನಿಸದೆ ;
ತಲೆಯೆತ್ತಿ ನೋಡಿದಾಗಲೇ ತಿಳಿದದ್ದು
ಆ ದಾರಿ ಎತ್ತವು ಸಾಗದ ವೃತ್ತವೆಂದು.
ನನ್ನೆಲ್ಲ ಹುಚ್ಚು ಮಾತಿಗೂ ಹ್ಞೂಗುಡುತ್ತಿದ್ದ
ನಿನ್ನನ್ನು ನೋಡಿ ನಾ ಹಿಗ್ಗಿದೆ ;
ಆ ನಂತರವೇ ಅರಿತೆ
ನೀ ಕಿವುಡನೆಂದು.
ನೀನಾಡುವ ಪ್ರತಿ ಮಾತೂ
ನನ್ನ ಹೃದಯ ತುಂಬಿ ಪ್ರತಿಧ್ವನಿಸುತ್ತಿತ್ತು;
ನಾವಿದ್ದದ್ದು ಮಸುಕಿನ ಕೂಪದಲ್ಲಿ
ಎಂಬ ಜ್ನಾನವಿಲ್ಲದವಳಾಗಿದ್ದೆ ಆಗ.
ನೆಲಕಚ್ಚಿ ಕೂತು,ತಲೆ ಮೇಲೆ ಕೈ ಹೊತ್ತು
ಅಳುವ ಜಾಯಮಾನವಲ್ಲ ನನ್ನದು!
ಒಡೆದು ಗೋಡೆಯ ಮುನ್ನುಗ್ಗಿರುವೆ,
ಸಾಗುವೆ ಹೊಸ ಬೆಳಕಿನೆಡೆಗೆ.